ಧಾರವಾಡ: ಹುಬ್ಬಳ್ಳಿಯಲ್ಲಿ ಆರ್ಕೆಟಿಕ್ಟ್ ಆಗಿರುವ ಸುಧೀರ ಹಾಗೂ ರುಕ್ಮೀಣಿ ದಂಪತಿಯ ಪುತ್ರಿ ಕುಮಾರಿ ಶ್ರೀಯಾ ಎಸ್.ಕರಿ ಅವರು ಕೃಷಿವಿವಿಯಲ್ಲಿ ಬಿಎಸ್ಸಿ ಬಾಟನಿ ವಿಭಾಗದಲ್ಲಿ 3 ಚಿನ್ನದ ಪದಕವನ್ನು ಪಡೆದು ಕೃಷಿ ವಿವಿಗೆ ಕೀರ್ತಿ ತಂದಿದ್ದಾರೆ. ಸಧ್ಯ ಹರಿಯಾಣದಲ್ಲಿ ಎಂಎಸ್ಸಿಯಲ್ಲಿ ರಿಸರ್ಚ ಮಾಡುತ್ತಿರುವ ಇವರು, ಭವಿಷ್ಯದಲ್ಲಿ ಕೃಷಿ ಕ್ಷೇತ್ರದಲ್ಲಿ ವಿಜ್ಞಾನಿಯಾಗಬೇಕೆಂದು ಕನಸು ಕಂಡಿದ್ದಾರೆ.
ನಿತ್ಯವು 6-7 ಗಂಟೆಗಳ ಸತತ ಅಧ್ಯಯನ ಯಶಸ್ಸಿಗೆ ಕಾರಣವಾಗಿದೆ ಎಂದು 3 ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಶ್ರೀಯಾ ಎಸ್.ಕರಿ ಹೇಳಿದರು. ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಶ್ರೀಯಾ ತಂದೆ ಸುಧೀರ ಮಾತನಾಡಿ, ನಮ್ಮದು ಮೂಲತಃ ಆರ್ಕಿಟೆಕ್ಟ್ ಕುಂಟುಬ. ನಾನು ನನ್ನ ಹೆಂಡತಿ ಇಬ್ಬರು ಮನಗೆಳ ವಿನ್ಯಾಸ ಮಾಡುವವರು. ಇದೀಗ ಮಗಳು ಕೃಷಿಯಲ್ಲಿ ಸಾಧನೆ ಮಾಡಲು ಹೊರಟಿದ್ದಾಳೆ. ಅವಳ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಇನ್ನೊಬ್ಬ ಮಗಳು ಆದಿತಿ ದೆಹಲಿಯಲ್ಲಿ (ಎಸಪಿಎ) ಕಾಲೇಜಿನಲ್ಲಿ ಆರ್ಕೆಟಿಕ್ಟ್ ಓದುತ್ತಿದ್ದಾಳೆ. ಮಕ್ಕಳ ವಿದ್ಯಾಭ್ಯಾಸ ನಮಗೆ ಮುಖ್ಯ ಎಂದು ಖುಷಿ ಹಂಚಿಕೊಂಡರು.
ಧಾರವಾಡ ಕೃಷಿ ವಿವಿಯಲ್ಲಿ 37 ನೇ ಘಟಿಕೋತ್ಸವ, ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆಯಿತು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ನವದೆಹಲಿಯ, ಕೃಷಿ ವಿಜ್ಞಾನಿಗಳ ನೇಮಖಾತಿ, ಅಧ್ಯಕ್ಷರಾದ ಡಾ.ಸಂಜಯಕುಮಾರ ಹಾಗೂ ಕೃಷಿ ವಿಶ್ವವಿದ್ಯಾಲಯದ ಸಹಕುಲಾಧಿಪತಿಯಾದ, ಕೃಷಿ ಸಚಿವ ಚೆಲುವರಾಯಸ್ವಾಮಿ ಮುಖ್ಯ ಅತಿಥಿಯಾಗಿ ಘಟಿಕೋತ್ಸವದಲ್ಲಿ ಭಾಗಿಯಾದರು.
ಕೃಷಿವಿವಿಯಲ್ಲಿ ಈ ಬಾರಿ ಘಟಿಕೋತ್ಸವದಲ್ಲಿ ಇಸ್ರೋ ಅಧ್ಯಕ್ಷ ಡಾ. ಎಸ್.ಸೋಮನಾಥ ಅವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಲಾಯಿತು. ಅವರ ಅನುಪಸ್ಥಿತಿಯಲ್ಲಿ ರಾಜ್ಯಪಾಲರು ಗೌರವ ಡಾಕ್ಟರೇಟ ಘೋಷಣೆ ಮಾಡಿದರು.
37 ನೇ ಘಟಿಕೋತ್ಸವದಲ್ಲಿ 46 ಕೃಷಿ ವಿಶ್ವವಿದ್ಯಾಲಯದ ಚಿನ್ನದ ಪದಕಗಳು, 10 ಇತರೆ ಚಿನ್ನದ ಪದಕಗಳು ಹಾಗೂ 9 ನಗದು ಬಹುಮಾನಗಳನ್ನು ಪ್ರದಾನ ಮಾಡಲಾಯಿತು. 69 ಪಿಎಚ್ಡಿ, 237 ಸ್ನಾತಕೋತ್ತರ ಹಾಗೂ 627 ಸ್ನಾತಕ ಪದವಿ ಸೇರಿದಂತೆ, 933 ಅಭ್ಯರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.ಇದರಲ್ಲಿ 745 ಅಭ್ಯರ್ಥಿಗಳು ಹಾಜರಾತಿಯಲ್ಲಿಯೂ, 188 ಗೈರು ಹಾಜರಾತಿಯಲ್ಲಿ ಪದವಿಗಳನ್ನು ಸ್ವೀಕರಿಸಿದರು.