ಬೆಂಗಳೂರು ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರ ನಿರ್ಮಾಣದ ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ-2 ಚಿತ್ರದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ಮುಕ್ತಾಯವಾಯಿತು.
ನಾಯಕಿ ರಚಿತಾರಾಮ್ ಡ್ರಾಯಿಂಗ್ ಬೋರ್ಡ್ ಮೇಲೆ ಆರ್ಟ್ ಬಿಡಿಸುತ್ತಿರುವ ದೃಶ್ಯದೊಂದಿಗೆ ಮಾಧ್ಯಮಗಳ ಸಮ್ಮುಖದಲ್ಲಿ ಕುಂಬಳಕಾಯಿ ಒಡೆಯುವ ಶಾಸ್ತ್ರ ಮಾಡಲಾಯಿತು.
ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಸಂಜು ಹಾಗೂ ಗೀತಾರ ನವೀನ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ಹೇಳಹೊರಟಿದ್ದಾರೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜೊತೆ ರಮ್ಯಾ ಬದಲು ನಾಯಕಿಯಾಗಿ ರಚಿತಾರಾಮ್ ಎಂಟ್ರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಾಗಶೇಖರ್, ನಮ್ಮ ಚಿತ್ರ ವರ್ಷದ ಹಿಂದೆ ಶುರುವಾಗಿತ್ತು. ಶಿಡ್ಲಘಟ್ಟ, ಸ್ವಿಟ್ಜರ್ ಲ್ಯಾಂಡ್, ಬೆಂಗಳೂರು ಸುತ್ತಮುತ್ತ ಓಟ್ಟು 72 ದಿನಗಳ ಕಾಲ ಆರು ಹಂತಗಳಲ್ಲಿ ಯಶಸ್ವಿಯಾಗಿ ಶೂಟಿಂಗ್ ನಡೆಸಲಾಯಿತು, ನಿರ್ಮಾಪಕ ಕುಮಾರ್ ಅವರ ಸಹಕಾರದಿಂದ ಇದು ಸಾಧ್ಯವಾಯಿತು. ಕಿಟ್ಟಪ್ಪ, ರಚಿತಾರಾಮ್, ಸಾಧು ಕೋಕಿಲ, ತಬಲಾನಾಣಿ ಸೇರಿದಂತೆ ಬಿಗ್ ಸ್ಟಾರ್ ಕಾಸ್ಟ್ ಚಿತ್ರದಲ್ಲಿದೆ. ಈಗಾಗಲೇ ಎಡಿಟಿಂಗ್, ಡಬ್ಬಿಂಗ್ ಕೂಡ ನಡೆದಿದೆ. ಸದ್ಯದಲ್ಲೇ ಆಡಿಯೋ ರಿಲೀಸ್ ಮಾಡೋ ಪ್ಲಾನಿದೆ. ಇವತ್ತಿನ ಟೆಕ್ನಾಲಜಿಯ ಲವ್ ಸ್ಟೋರಿ, ಜೊತೆಗೆ ಒಂದು ಸರ್ ಪ್ರೈಸ್ ಚಿತ್ರದಲ್ಲಿದೆ. ಇದರಲ್ಲೂ ನಾಯಕ ಬ್ಯೂಟಿ, ಐ ಲವ್ ಯೂ ಗೀತಾ ಅಂತಲೇ ಹೇಳ್ತಾನೆ ಎಂದರು.
ನಂತರ ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಛಲವಾದಿ ಕುಮಾರ್, ಕಳೆದ ಆಗಸ್ಟ್ ನಲ್ಲಿ ಶೂಟಿಂಗ್ ಶುರು ಮಾಡಿದ್ದೆವು. ಆಗಸ್ಟ್ 19ಕ್ಕೇ ಶೂಟಿಂಗ್ ಮುಗಿದಿದೆ.ನಮ್ಮ ಟೆಕ್ನಿಕಲ್ ಟೀಮ್ ಸಹಕಾರ ತುಂಬಾ ಚೆನ್ನಾಗಿತ್ತು. ಒಂದೇ ಒಂದು ಅನ್ ವಾಂಟೆಡ್ ಶಾಟ್ಸ್ ತೆಗೆದಿಲ್ಲ. ಹಾಸನ, ಹಾವೇರಿ ಹೀಗೆ ಬೇರೆ ಬೇರೆ ಊರುಗಳಲ್ಲಿ ನಮ್ಮ ಚಿತ್ರದ ಮೂರು ಹಾಡುಗಳನ್ನು ರಿಲೀಸ್ ಮಾಡೋ ಪ್ಲಾನಿದೆ ಎಂದು ಹೇಳಿದರು.
ಇನ್ನು ನಾಯಕ ಕಿಟ್ಟಿ ಮಾತನಾಡುತ್ತ ಇವತ್ತಿಗೆ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸದ್ಯದಲ್ಲೇ ಹಾಡುಗಳ ಮೂಲಕ ನಿಮ್ಮ ಮುಂದೆ ಬರುತ್ತೇವೆ. ಇಲ್ಲಿ ರೇಶ್ಮೆ ಬೆಳೆಗಾರನಾಗಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.
ನಾಯಕಿ ರಚಿತಾರಾಂ ಮಾತನಾಡಿ ಈ ಸಿನಿಮಾದ ಜರ್ನಿ ತುಂಬಾ ಚೆನ್ನಾಗಿತ್ತು. ನನ್ನ ಪಾತ್ರದ ಡಬ್ಬಿಂಗ್ ಮಾಡಿಲ್ಲ, ಟೈಟಲ್ ಅದೇ ಇದ್ದರೂ ಇದು ಬೇರೆ ಥರದ ಕಥೆ. ಸ್ವಿಟ್ಜರ್ ಲ್ಯಾಂಡ್ ಶೂಟಿಂಗ್ ಸಮಯದಲ್ಲಿ ನಮಗಾದ ಅನುಭವ ನೆನಪಲ್ಲುಳಿದಿದೆ. ನವೆಂಬರ್-ಡಿಸೆಂಬರ್ ವೇಳೆ ಆದರೂ ವೆದರ್ ನಮಗೆಲ್ಲೂ ತೊಂದರೆ ಕೊಡಲಿಲ್ಲ, ಸಿನಿಮಾ ವಿಜ್ಯುಯಲಿ ತುಂಬಾ ಚೆನ್ನಾಗಿ ಬಂದಿದೆ. ಅದಕ್ಕೆ ಸತ್ಯ ಹೆಗಡೆ ಅವರೇ ಕಾರಣ. ಮುಖ್ಯವಾಗಿ ನಾವು ಹೋದಲ್ಲೆಲ್ಲ ವಾತಾವರಣ ನಮಗೆ ಸಹಕಾರಿಯಾಗಿತ್ತು ಎಂದರು.
ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ ನಮ್ಮ ಮಣ್ಣಿನ ಪ್ರೇಮಿಗಳ ಪ್ರೇಮಕಾವ್ಯವನ್ನು ನಾಗಶೇಖರ್ ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ.
ಛಾಯಾಗ್ರಾಹಕ ಸತ್ಯ ಹೆಗ್ಡೆ ಮಾತನಾಡಿ ಒಂದು ಸೂಪರ್ ಹಿಟ್ ಚಿತ್ರದ ಸೀಕ್ವೇಲ್ ಮಾಡುವಾಗ ಭಯ ಇದ್ದೇ ಇರುತ್ತೆ. ಶಿಡ್ಲಘಟ್ಟದಲ್ಲಿ ಶೂಟ್ ಮಾಡಿದ್ದು ನಮಗೆ ಸರ್ ಪ್ರೈಸ್ ಹಾಗೀ ಚಾಲೆಂಜ್ ಆಗಿತ್ತು. ಈ ಚಿತ್ರದಲ್ಲಿ ಕಥೆ ಹೇಳುವ ರೀತಿ ಚೇಂಜ್ ಮಾಡಿಕೊಂಡಿದ್ದೇವೆ. ಸ್ವಿಟ್ಜರ್ ಲ್ಯಾಂಡ್ ನ ಹನ್ನೊಂದು ಲೊಕೇಶನ್ ಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು. ಸಾಧು ಕೋಕಿಲ, ತಬಲಾನಾಣಿ, ಮೂಗು ಸುರೇಶ್ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಚಿತ್ರದ ಕುರಿತಂತೆ ಮಾತನಾಡಿದರು.
ಸಂಗೀತ ನಿರ್ದೇಶಕ ಶ್ರೀಧರ ವಿ. ಸಂಭ್ರಮ್ ಚಿತ್ರದಲ್ಲಿ ಐದು ಸುಂದರ ಹಾಡುಗಳನ್ನು ಮಾಡಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ. ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ ಕುಮಾರ್ ಸೇರಿದಂತೆ ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ. A 24 ಕ್ರಿಯೇಶನ್ಸ್ ಥ್ರೂ ಗೋಕುಲ್ ಫಿಲಂಸ್ ಈ ಚಿತ್ರವನ್ನು ಪ್ರಪಂಚದಾದ್ಯಂತ ರಿಲೀಸ್ ಮಾಡುತ್ತಿದೆ.