Congressರಾಜಕೀಯ

DK Shivakumar, Bengaluru: ಜನರಿಗೆ ಉಪಕಾರ ಸ್ಮರಣೆ ಇಲ್ಲ, ನೀರಿನ ದರ ಏರಿಕೆ ಮಾಡೇ ಮಾಡ್ತೀವಿ; ಡಿಸಿಎಂ ಡಿಕೆಶಿ ಆಕ್ರೋಶ

ಬೆಂಗಳೂರು “ಬೆಂಗಳೂರಿನಲ್ಲಿ ಕಳೆದ 12-13 ವರ್ಷಗಳಿಂದ ನೀರಿನ ದರ ಹೆಚ್ಚಳ ಮಾಡಿಲ್ಲ. ಆದರೂ ಬಿಡಬ್ಲ್ಯೂ ಎಸ್ ಎಸ್ ಬಿ ಕಷ್ಟಪಟ್ಟು ನಿರ್ವಹಣೆ ಮಾಡುತ್ತಿದೆ. ಯಾರೇ ಆಕ್ಷೇಪ ವ್ಯಕ್ತಪಡಿಸಿದರೂ ನೀರಿನ ದರ ಏರಿಕೆ ಅನಿವಾರ್ಯ. ಅದನ್ನು ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನಸೌಧದ ಆವರಣದಲ್ಲಿ ಗುರುವಾರ ನಡೆದ “ಬಾಗಿಲಿಗೆ ಬರಲಿದೆ ಕಾವೇರಿ ಸಂಪರ್ಕ, 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ” ಅಭಿಯಾನಕ್ಕೆ ಚಾಲನೆ ನೀಡಿ ಶಿವಕುಮಾರ್ ಅವರು ಮಾತನಾಡಿದರು.

“ರಾಜಧಾನಿಯ 1.40 ಕೋಟಿ ಜನಸಂಖ್ಯೆಗೆ ನೀರನ್ನು ಒದಗಿಸಲೇ ಬೇಕು. ಇದಕ್ಕಾಗಿ ಸಾಲ ಮಾಡಿ, ಸಂಪರ್ಕ ಜಾಲವನ್ನು ಹೆಚ್ಚಿಸದ ಹೊರತು ನೀರು ಕೊಡಲು ಕಷ್ಟವಾಗುತ್ತದೆ. ದರ ಹೆಚ್ಚಳ ಮಾಡದಿದ್ದರೇ ನೀರು ಸರಬರಾಜು ಕಂಪನಿ ಉಳಿಯುವುದಿಲ್ಲ, ನೌಕರರು ಬದುಕಲು ಆಗುವುದಿಲ್ಲ. ಸಂಸ್ಥೆಗೆ ವಿದ್ಯುತ್ ಬಿಲ್ ಕಟ್ಟಲು ಆಗುತ್ತಿಲ್ಲ. ಎಲ್ಲರಿಗೂ ನೀರಿನ ದರ ಹೆಚ್ಚಳ ಮಾಡುವುದಿಲ್ಲ. ಎಷ್ಟು ಏರಿಕೆ ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಚರ್ಚೆ ಮಾಡಲಿ. ಧರಣಿ ಮಾಡಲಿ ನಾನು ಇದಕ್ಕೆ ಬದ್ಧವಾಗಿದ್ದೇನೆ” ಎಂದು ಹೇಳಿದರು.

ಇಲಾಖೆಗೆ ಪ್ರತ್ಯೇಕ ವಿದ್ಯುತ್ ತಯಾರಿಕಾ ಕಂಪನಿ

“14 ವರ್ಷಗಳಲ್ಲಿ ಸಾಕಷ್ಟು ಬಾರಿ ವಿದ್ಯುತ್ ಬಿಲ್ ಹೆಚ್ಚಳವಾಗಿದೆ. ಇದಕ್ಕಾಗಿ ಇಲಾಖೆಯದ್ದೇ ಪ್ರತ್ಯೇಕ ಕಂಪನಿ ಸ್ಥಾಪಿಸಿ ನೀವೇ ಸೋಲಾರ್ ಸೇರಿದಂತೆ ಇತರೇ ಮೂಲಗಳಿಂದ ವಿದ್ಯುತ್ ತಯಾರಿಸಿದರೆ ಹಣ ಉಳಿತಾಯವಾಗುತ್ತದೆ. ಬೆಂಗಳೂರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮ ರೂಪಿಸಬಹುದು. ದೂರಾಲೋಚನೆ ಇಟ್ಟುಕೊಂಡು ಈಗಾಗಲೇ ಕಂಪನಿ ಸಿದ್ಧಪಡಿಸಲಾಗಿದೆ. ಪಾವಗಡದಲ್ಲಿ ಸೋಲಾರ್ ಪಾರ್ಕ್ ಮಾಡಿದ ಕಾರಣಕ್ಕೆ ಮೂರುವರೆ ರೂಪಾಯಿಗೆ ವಿದ್ಯುತ್ ಸಿಗುತ್ತಿದೆ. ಆಗ ಹಲವರು ತಲೆಕೆಟ್ಟಿದೆಯಾ ಎಂದು ಆಡಿಕೊಂಡರು. ಇದರಿಂದ ಸರಬರಾಜು ಮಾಡುವ ಖರ್ಚು ಉಳಿತಾಯವಾಗಿದೆ” ಎಂದು ಹೇಳಿದರು.

ನಾನಿರುವ ತನಕ ಖಾಸಗೀಕರಣ ಆಗುವುದಿಲ್ಲ

ಬಿಡಬ್ಲ್ಯೂ ಎಸ್ ಎಸ್ ಬಿ ನನ್ನ ಬಳಿಯೇ ಇರುವ ಕಾರಣ ಅನೇಕರು ನೂತನ ಯೋಜನೆ ಕುರಿತು ಚರ್ಚೆ ನಡೆಸಲು ಬಂದರು. ಈ ಹಿಂದೆ ಇಂಧನ ಇಲಾಖೆಯಲ್ಲಿ ಇದ್ದಾಗಲು ಇದೇ ಪ್ರಸ್ತಾವನೆ ಬಂದಿತ್ತು. ಮುಂಬೈ ಸೇರಿದಂತೆ ಇತರೆಡೆ ಅದಾನಿ ಹಾಗೂ ಇತರೇ ಕಂಪೆನಿಗಳು ವಿದ್ಯುತ್ ಸರಬರಾಜು ಮಾಡುತ್ತಿವೆ. ನಾನು ಇರುವ ತನಕ ಇದೆಲ್ಲವೂ ಸಾಧ್ಯವಿಲ್ಲ. ಈ ವಿಚಾರ ಇಲ್ಲಿಗೆ ಬಿಟ್ಟುಬಿಡಿ, ಇದರ ಸುದ್ದಿಗೆ ಬರಬೇಡಿ ಎಂದು ವಾಪಸ್ ಕಳುಹಿಸಿದೆ” ಎಂದರು.

“ಜಲ ಹಾಗೂ ಇಂಧನ ಇವೆರಡೂ ಬಹಳ ಮುಖ್ಯವಾದವುಗಳು. ಈ ಹಿಂದೆ ನಾನು ಇಂಧನ ಸಚಿವನಾಗಿದ್ದೆ. ಈಗ ನೀರಾವರಿ ಸಚಿವನಾಗಿದ್ದೇನೆ. ಜೆ.ಹೆಚ್ ಪಟೇಲ್ ಅವರ ಕಾಲದಲ್ಲಿ ನೀರು ಸರಬರಾಜನ್ನು ಖಾಸಗಿಯವರಿಗೆ ನೀಡಬೇಕು ಎನ್ನುವ ಪ್ರಸ್ತಾವನೆ ಬಂದಿತ್ತು. ನಂತರ ಎಸ್.ಎಂ ಕೃಷ್ಣ ಅವರ ಸರ್ಕಾರದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗಲೂ ಈ ಬಗ್ಗೆ ದೊಡ್ಡ ಚರ್ಚೆಯಾಯಿತು” ಎಂದರು.

Leave a Reply

Your email address will not be published. Required fields are marked *