ಕ್ರಿಮಿನಲ್ಚುನಾವಣೆ

“ಭ್ರೂಣ ಹತ್ಯೆ ತಡೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ; ಶೀಘ್ರ 5 ಲಕ್ಷ ದಂಡ, 5 ವರ್ಷ ಜೈಲು ಶಿಕ್ಷೆ ಕಾನೂನು”

Edited by | krantisamachar.in | Updated: 18 Jan 2024, 9:40 pm

ಹೈಲೈಟ್ಸ್‌:

  • ಭ್ರೂಣ ಹತ್ಯೆ ತಡೆಯಲು ಕಠಿಣ ಕ್ರಮಗಳನ್ನ ಕೈಗೊಳ್ಳಲು ಮುಂದಾಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌.
  • ಭ್ರೂಣ ಹತ್ಯೆ ತಡೆಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ರಚಿಸುತ್ತಿದೆ.
  • 5 ಲಕ್ಷದ ವರೆಗೆ ದಂಡ ವಿಧಿಸಿ, 5 ವರ್ಷ ಜೈಲು ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕಾಯ್ದೆ ಜಾರಿಗೆ ಚರ್ಚೆ.

ಬೆಂಗಳೂರಿನಲ್ಲಿ ಗುರುವಾರ PC & PNDT ಕಾಯ್ದೆ ಅಡಿ ರಚಿಸಲಾಗಿದ್ದ ಮೇಲ್ವಿಚಾರಣಾ ಸಮಿತಿಯ ಜೊತೆ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಭ್ರೂಣ ಹತ್ಯೆ ವಿಚಾರದಲ್ಲಿ ಜಾಗೃತಿಯ ಜೊತೆಗೆ ಕಠಿಣ ಕ್ರಮಗಳು ಆಗಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡೂರಾವ್, ” ಮೇಲ್ವಿಚಾರಣಾ ಸಮಿತಿಯ ಮೊದಲ ಸಭೆ ಇಂದು ಸೇರಲಾಗಿತ್ತು. ನಾಲ್ವರು ಶಾಸಕಿಯರು ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸಮಿತಿಯ ಸದಸ್ಯರಿದ್ದಾರೆ. ಭ್ರೂಣ ಹತ್ಯೆ ತಡೆ ನಿಟ್ಟಿನಲ್ಲಿ ಶಾಸಕಿ ರೂಪಕಲಾ, ನಯನಾ ಮೊಟಮ್ಮ, ಲತಾ ಮಲ್ಲಿಕಾರ್ಜುನ್ ಅವರುಗಳು ತಮ್ಮ ಸಲಹೆಗಳನ್ನ ನೀಡಿದ್ದಾರೆ. ಪ್ರತಿ ಹಂತದಲ್ಲಿ ಮೇಲ್ವಿಚಾರಣೆ ನಡೆಸುವುದರ ಜೊತೆಗೆ, ಹೆಣ್ಣು ಮಕ್ಕಳು ಸಮಾಜಕ್ಕೆ ಎಷ್ಟು ಮುಖ್ಯ ಎಂಬುದರ ಬಗ್ಗೆ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗುವುದು ” ಎಂದರು.

ಭ್ರೂಣ ಹತ್ಯೆಗಳ ತಡೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ರಾಜ್ಯಮಟ್ಟದಲ್ಲಿ ಆರೋಗ್ಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಜಿಲ್ಲಾ ಮಟ್ಟದಲ್ಲೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ಕಾರ್ಯಪಡೆ ರಚಿಸಲು ನಿರ್ಧರಿಸಿದ್ದೇವೆ.‌ ಈ ಕಾರ್ಯಪಡೆಗಳು ಭ್ರೂಣ ಹತ್ಯೆ ಪ್ರಕರಣಗಳ ವಿಚಾರದಲ್ಲಿ pc & pndt ಕಾಯ್ದೆ ಅಡಿ ಕಾರ್ಯನಿರ್ವಹಿಸಿ ಹೆಚ್ಚು ನಿಗಾ ವಹಿಸಲಿವೆ.

ಅಲ್ಲದೇ ಆರೋಗ್ಯ ಇಲಾಖೆಯ ಸಕ್ಷಮ ಪ್ರಾಧಿಕಾರಕ್ಕೆ ಪ್ರತ್ಯೇಕವಾಗಿ ಎಸಿಪಿ ಮಟ್ಟದ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಸಬ್ ಇನ್ಸ್ ಪೆಕ್ಟರ್ ನಿಯೋಜಿಸುವಂತೆ ಗೃಹ ಇಲಾಖೆಗೆ ಪತ್ರ ಬರೆಯಲಾಗುವುದು. ಇದರಿಂದ ಭ್ರೂಣ ಹತ್ಯೆ ಪ್ರಕರಣಗಳನ್ನ ಟ್ರೇಸ್ ಮಾಡಲು ಸಹಕಾರಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

5 ಲಕ್ಷ ದಂಡ; 5 ವರ್ಷ ಜೈಲು ಶಿಕ್ಷೆ

ಭ್ರೂಣ ಹತ್ಯೆ ನಡೆಸುತ್ತಿರುವವರ ಮೇಲೆ ಕಠಿಣ ಕ್ರಮಗಳು ಆಗಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಈಗಿರುವ ಕಾಯ್ದೆಯಲ್ಲಿ 10 ಸಾವಿರ ದಂಡ, 3 ವರ್ಷ ಜೈಲು ಶಿಕ್ಷೆ ಇದೆ. 5 ಲಕ್ಷದ ವರೆಗೆ ದಂಡ ವಿಧಿಸಿ, 5 ವರ್ಷ ಜೈಲು ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ನಾನ್ ಬೇಲಬಲ್ ಕೇಸ್ ಆಗಬೇಕು. ಈ ನಿಟ್ಟಿನಲ್ಲಿ ಮುಂದಿನ ಸಭೆ ತೀರ್ಮಾನ ಕೈಗೊಳ್ಳುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Leave a Reply

Your email address will not be published. Required fields are marked *