ಸಿನೆಮಾ

Kaatera Review: ಮಚ್ಚು ತಟ್ಟುತ್ತಲೇ ಪ್ರೇಕ್ಷಕರ ಮನಸ್ಸು ಮುಟ್ಟುವ ‘ಕಾಟೇರ’

‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಮತ್ತು ನಿರ್ದೇಶಕ ತರುಣ್ ಸುಧೀರ್ ಕಾಂಬಿನೇಷನ್‌ನಲ್ಲಿ ಈ ಹಿಂದೆ ‘ರಾಬರ್ಟ್’ ಸಿನಿಮಾ ತೆರೆಗೆ ಬಂದಿತ್ತು. ಆ ಸಿನಿಮಾ ಫ್ಯಾನ್ಸ್‌ಗೆ ಇಷ್ಟವಾಗಿತ್ತು, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು ಕೂಡ. ಇದೀಗ ದರ್ಶನ್ ಮತ್ತು ತರುಣ್ ‘ಕಾಟೇರ’ ಸಿನಿಮಾಕ್ಕಾಗಿ ಒಂದಾಗಿದ್ದಾರೆ. ಈ ಚಿತ್ರದಲ್ಲೂ ಹಿಂದಿನ ಚಿತ್ರದ ಮ್ಯಾಜಿಕ್ ವರ್ಕ್ ಆಗಿದೆಯಾ? ಇಲ್ಲಿದೆ ಓದಿ ಸಿನಿಮಾ ವಿಮರ್ಶೆ.

‘ಕಾಟೇರ’ ಕಥೆ ಏನು?

‘ಕಾಟೇರ’ ಸಿನಿಮಾದ ಕಥೆ ನಡೆಯುವುದು 1974ರ ಕಾಲಘಟ್ಟದಲ್ಲಿ. ಭೀಮನಹಳ್ಳಿ ಎಂಬ ಊರಿನಲ್ಲಿ ಕುಲುಮೆ ಕೆಲಸ ಮಾಡುತ್ತಿರುವ ಯುವಕ ಕಾಟೇರ (ದರ್ಶನ್). ದುಡಿಮೆನೇ ದೇವ್ರು ಅಂತ ನಂಬಿರುವ ವ್ಯಕ್ತಿ. ಆದರೆ ಇದೇ ಊರಿನಲ್ಲಿ ಜಮಿನ್ದಾರನ ದಬ್ಬಾಳಿಕೆ ಇರುತ್ತದೆ, ಗೇಣಿದಾರರಿಗೆ ಅನ್ಯಾಯವಾಗುತ್ತಿರುತ್ತದೆ, ಭತ್ತ ಬೆಳೆಯುವ ರೈತನಿಗೆ ಬದುಕೋದೇ ಕಷ್ಟವಾಗಿರುತ್ತದೆ. ಅಷ್ಟಕ್ಕೂ ಆ ಊರಿನಲ್ಲಿ ಅಂಥದ್ದು ಏನಾಗುತ್ತಿರುತ್ತದೆ? ತನ್ನವರ ಮೇಲಿನ ದಬ್ಬಾಳಿಕೆಗೆ ಕಾಟೇರ ಯಾವ ರೀತಿ ಉತ್ತರ ಕೊಡುತ್ತಾನೆ ಎಂಬ ಕುತೂಹಲದೊಂದಿಗೆ ಸಿನಿಮಾ ಸಾಗುತ್ತದೆ.

ಈ ಮೇಲಿನ ಕಥೆಯನ್ನು ಓದಿ, ‘ಇದು ಕೂಡ ಹತ್ತರಲ್ಲಿ ಹನ್ನೊಂದು..’ ಅನ್ನೋ ಹಾಗಿಲ್ಲ. ‘ಕಾಟೇರ’ ಕಥೆ ಕೇಳುವುದಕ್ಕೆ ಸಾಮಾನ್ಯವಾಗಿದೆ ಎನಿಸಿದರೂ, ಇಲ್ಲಿ ಹೇಳಿರುವ ವಿಚಾರಗಳು ಹಲವು. ನಿರ್ದೇಶಕ ತರುಣ್ ಸುಧೀರ್ ಬುದ್ದಿವಂತಿಕೆಗೆ ಇದರ ಚಿತ್ರಕಥೆಯೇ ಸಾಕ್ಷಿ. 70ರ ದಶಕದ ಕಾಲಘಟ್ಟದಲ್ಲಿನ ಹಲವು ಸಾಮಾಜಿಕ ಪಿಡುಗುಗಳನ್ನು (ಈಗಲೂ ಇರುವಂತಹವು) ಸಿನಿಮಾದೊಳಗೆ ದಾಟಿಸಿದ್ದಾರೆ. ಆ ಯಾವ ವಿಚಾರಗಳು ಸಿನಿಮಾದ ಕಥೆಗೆ ಭಾರವಾಗದಂತೆ, ಹೇಳಬೇಕಾದ ವಿಷಯವನ್ನು ಪ್ರಬಲವಾಗಿಯೇ, ಪರಿಣಾಮಕಾರಿಯಾಗಿಯೇ ತೆರೆಮೇಲೆ ತಂದಿದ್ದಾರೆ. ಹಾಗೇ, ಇಂತಹ ವಿಚಾರಗಳನ್ನು ಹೇಳುವುದಕ್ಕೆ ‘ಸ್ಟಾರ್’ ನಟರೊಬ್ಬರನ್ನು ಪ್ರಯೋಗಕ್ಕೆ ಒಡ್ಡಿರುವುದಕ್ಕಾಗಿ ನಿರ್ದೇಶಕ ತರುಣ್‌ಗೆ ಮೆಚ್ಚುಗೆ ಸಲ್ಲಬೇಕು. ಕನ್ನಡದಲ್ಲಿ ನಮ್ಮ ಸೊಗಡಿನ ಕಥೆ, ನಮ್ಮ ನೆಲದ ಕಥೆಗಳು ತೆರೆಮೇಲೆ ಬರುತ್ತಿಲ್ಲ ಎಂಬ ಕೊರಗಿಗೆ ‘ಕಾಟೇರ’ ಸಮಾಧಾನ ಹೇಳಿದ್ದಾನೆ..

‘ಕಾಟೇರ’ ಸಿನಿಮಾದ ಬರವಣಿಗೆ ವಿಚಾರದಲ್ಲಿ ತ್ರಿಮೂರ್ತಿಗಳ ಕೈಚಳಕವಿದೆ. ಸ್ಕ್ರಿಪ್ಟ್‌ ವಿಚಾರದಲ್ಲಿ ಜಡೇಶ್ ಕೆ ಹಂಪಿ ಮತ್ತು ತರುಣ್ ಸುಧೀರ್ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರೆ, ಸಂಭಾಷಣೆ ವಿಚಾರದಲ್ಲಿ ಮಾಸ್ತಿ ಮತ್ತೊಮ್ಮೆ ಸಿಕ್ಸರ್ ಬಾರಿಸಿದ್ದಾರೆ. ಅರ್ಥಪೂರ್ಣ ಕಥೆಗೆ ತೂಕಬದ್ಧ ಮಾತುಗಳನ್ನು ಪೋಣಿಸಿ, ‘ಕಾಟೇರ’ನ ಅಂದವನ್ನು ಹೆಚ್ಚಿಸಿದ್ದಾರೆ. ತರುಣ್‌ ಸುಧೀರ್ ಕಲ್ಪನೆಗೆ ತಕ್ಕಂತೆ ಸುಧಾಕರ್‌ ಎಸ್ ರಾಜ್ ಛಾಯಾಗ್ರಹಣದ ಕೆಲಸ ಇದೆ. ಜಾತಿ ಹೆಸರಿನಲ್ಲಿ ಶೋಷಣೆ, ರೈತರ ಸಮಸ್ಯೆಗಳು, ಮಾರ್ಯಾದೆಗೇಡು ಹತ್ಯೆ ವಿಚಾರಗಳನ್ನು ಪರಿಣಾಮಕಾರಿಯಾಗಿ ತೋರಿಸಲಾಗಿದೆ. ಮನುಷ್ಯ ಸಂಬಂಧಗಳ ಬಗ್ಗೆಯೂ ಈ ಸಿನಿಮಾ ಮಾತಾಡುತ್ತದೆ.

ಮೈಕೊಡವಿ ಎದ್ದುನಿಂತ ದರ್ಶನ್

‘ಕಾಟೇರ’ ಸಿನಿಮಾದಲ್ಲಿ ಒನ್‌ಮ್ಯಾನ್‌ ಶೋನಂತೆ ಮಿಂಚಿರುವುದು ನಟ ದರ್ಶನ್. ಬಹಳ ದಿನಗಳ ನಂತರ ನಟನೆಗೆ ಹೆಚ್ಚು ಒತ್ತು ಇರುವ ಪಾತ್ರವನ್ನು ಅಕ್ಷರಶಃ ಜೀವಿಸಿದ್ದಾರೆ. ಕಥೆಯ ಗೇಜ್‌ ಅರಿತು, ತಮ್ಮ ಇಮೇಜ್‌ ಅನ್ನು ಪಕ್ಕಕ್ಕಿಟ್ಟು ಕಾಟೇರನ ಪಾತ್ರ ಮಾಡಿದ್ದಾರೆ. ಅವರಿಲ್ಲಿ ಎರಡು ಶೇಡ್‌ನ ಪಾತ್ರ ಮಾಡಿರುವುದರಿಂದ ಇದು ಫ್ಯಾನ್ಸ್‌ಗೆ ಡಬಲ್ ಟ್ರೀಟ್ ಎನ್ನಬಹುದು. ಕುಲುಮೆಯಲ್ಲಿ ಮಚ್ಚು ತಟ್ಟುವ, ಎದುರಾಳಿಗಳ ಎದುರು ತೊಡೆ ತಟ್ಟುವ, ಭಾವುಕ ಸನ್ನಿವೇಶಗಳಲ್ಲಿ ಕಣ್ಣೀರಿಡುತ್ತ ಅಭಿಮಾನಿಗಳ ಹೃದಯ ಮುಟ್ಟುವ ದರ್ಶನ್‌ಗೆ ಫುಲ್ ಮಾರ್ಕ್ಸ್ ಸಿಗುತ್ತದೆ. ‘ಭಕ್ತ ಪ್ರಹ್ಲಾದ’ನ ಡೈಲಾಗ್ ಹೇಳುವ ಸೀನ್, ಫಸ್ಟ್ ಹಾಫ್‌ನಲ್ಲಿ ಬರುವ ಎರಡು ಫೈಟ್‌ಗಳು ಮಸ್ತ್ ರಂಜಿಸುತ್ತವೆ. ಇದುವರೆಗೂ ತೆರೆಮೇಲೆ ಕಾಣಿಸಿಕೊಂಡಿದ್ದಕ್ಕಿಂತಲೂ ಭಿನ್ನವಾಗಿ, ಇಲ್ಲಿ ಬೇರೆಯದೇ ರೀತಿಯಲ್ಲಿ ಮಿಂಚಿದ್ದಾರೆ ನಟ ದರ್ಶನ್‌

Let’s find a new way to think about the entire taxonomy of solar system objects, and not clutch to this concept of ‘planet,’ which, of course, only ever meant, ‘Do you move against the background stars, regardless of what you’re made of?’

ವಿ ಹರಿಕೃಷ್ಣ ಮಿಸ್ಸಿಂಗ್!

ದರ್ಶನ್ ಮತ್ತು ವಿ ಹರಿಕೃಷ್ಣ ಕಾಂಬಿನೇಷನ್‌ನಲ್ಲಿ ಹಲವು ಸೂಪರ್ ಹಿಟ್ ಹಾಡುಗಳನ್ನು ನಾವು ಕೇಳಿದ್ದೇವೆ. ಆದರೆ ‘ಕಾಟೇರ’ ಸಿನಿಮಾದಲ್ಲಿ ಆ ವಿಚಾರದಲ್ಲಿ ಫ್ಯಾನ್ಸ್‌ಗೆ ಕೊಂಚ ಬೇಸರವಾಗುತ್ತದೆ. ಎಂದಿನ ವಿ ಹರಿಕೃಷ್ಣ ಅವರ ಕೆಲಸ ಈ ಸಿನಿಮಾದಲ್ಲಿ ಅಷ್ಟಾಗಿ ಗಮನಸೆಳೆಯುವುದಿಲ್ಲ. ಇನ್ನು, ನಾಯಕಿ ಪಾತ್ರಕ್ಕೆ ಆರಾಧನಾ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೆ, ಮೊದಲ ಸಿನಿಮಾದಲ್ಲಿಯೇ ಉತ್ತಮ ಸ್ಕ್ರೀನ್‌ಸ್ಪೇಸ್ ಜೊತೆಗೆ ಅಭಿನಯಕ್ಕೆ ಹೆಚ್ಚು ಸ್ಕೋಪ್ ಇರುವ ಪಾತ್ರವೇ ಅವರಿಗೆ ಸಿಕ್ಕಿದೆ. ಆದರೂ ದರ್ಶನ್ ಎದುರು ಆರಾಧನಾ ಅಷ್ಟೇನೂ ಹೊಂದಿಕೆಯಾಗುವುದಿಲ್ಲ. ಸಿನಿಮಾದ ಅವಧಿಯನ್ನು ಕೊಂಚ ತಗ್ಗಿಸುವ ಅವಕಾಶಗಳಿದ್ದವು. ಫಸ್ಟ್‌ ಹಾಫ್‌ನಲ್ಲಿ ಬರುವ ಅನವಶ್ಯಕ ಹಾಡುಗಳಿಗೆ ಕತ್ತರಿ ಹಾಕಿದ್ದರೆ, ‘ಕಾಟೇರ’ ಓಟ ಇನ್ನೂ ರಭಸವಾಗಿರುತ್ತಿತ್ತು.

ಒಟ್ಟಾರೆಯಾಗಿ, ಮಾಸ್ ಸಿನಿಮಾಗಳನ್ನು ಇಷ್ಟಪಡುವ ಸಿನಿಪ್ರಿಯರಿಗೆ ‘ಕಾಟೇರ’ ಫುಲ್ ಮೀಲ್ಸ್. ಭರ್ಜರಿ ಎಂಟರ್‌ಟೇನ್‌ಮೆಂಟ್ ನೀಡುವುದರ ಜೊತೆಗೆ ಸಂದೇಶವನ್ನೂ ನೀಡುತ್ತಾನೆ ‘ಕಾಟೇರ’.

Shares:

Related Posts

Leave a Reply

Your email address will not be published. Required fields are marked *