ಚುನಾವಣೆರಾಜಕೀಯ

“ಮತ್ತೆ ರಾಜಧಾನಿಯತ್ತ ನುಗ್ಗಿದ ಅನ್ನದಾತರು: ರೈತರ ಬೃಹತ್ ಪ್ರತಿಭಟನೆಗೆ ಕಾರಣವೇನು?”

Noida Farmers Protest: ಕೃಷಿ ಕಾಯ್ದೆಗಳ ವಿರುದ್ಧದ ಸುದೀರ್ಘ ಪ್ರತಿಭಟನೆ ಬಳಿಕ ತಣ್ಣಗಾಗಿದ್ದ ರಾಜಧಾನಿ ದಿಲ್ಲಿ ಗಡಿ ಭಾಗ ಮತ್ತೆ ಉದ್ವಿಗ್ನಗೊಂಡಿದೆ. ಸಾವಿರಾರು ರೈತರು ದಿಲ್ಲಿ ಪ್ರವೇಶಿಸಲು ಮೆರವಣಿಗೆ ಸಾಗಿದ್ದಾರೆ. ಅವರನ್ನು ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಈ ಪ್ರತಿಭಟನೆ ಕೇಂದ್ರದ ನೀತಿ ಮಸೂದೆಗಳ ವಿರುದ್ಧ ಅಲ್ಲ.

ಹೈಲೈಟ್ಸ್‌:

  • ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಸಾವಿರಾರು ರೈತರಿಂದ ಬೃಹತ್ ಪ್ರತಿಭಟನೆ
  • ಸಂಸತ್‌ ಕಡೆಗಿನ ಮೆರವಣಿಗೆ ದಿಲ್ಲಿ ಪ್ರವೇಶಿಸದಂತೆ ತಡೆಯಲು ಪೊಲೀಸರ ಹರಸಾಹಸ
  • ಭೂ ಸ್ವಾಧೀನ ಪ್ರಕ್ರಿಯೆಗೆ ತಕ್ಕನಾಗಿ ಸೂಕ್ತ ಪರಿಹಾರ ಮತ್ತು ಪ್ಲಾಟ್‌ಗಳನ್ನು ನೀಡಲು ಆಗ್ರ

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಬಳಿ ಮತ್ತೆ ರೈತರ ಕೂಗು ಪ್ರತಿಧ್ವನಿಸಿದೆ. ಉತ್ತರ ಪ್ರದೇಶದ ನೋಯ್ಡಾದಿಂದ ಭಾರಿ ಸಂಖ್ಯೆಯಲ್ಲಿ ರೈತರು ಸಂಸತ್ ಭವನದ ಕಡೆಗೆ ಮೆರವಣಿಗೆ ಹೊರಟಿದ್ದು, ಅವರನ್ನು ತಡೆಯಲು ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದಾರೆ. ಇದರಿಂದ ನೋಯ್ಡಾ ಎಕ್ಸ್‌ಪ್ರೆಸ್‌ವೇನಲ್ಲಿ ವಿಪರೀತ ಸಂಚಾರ ದಟ್ಟಣೆ ಉಂಟಾಗಿದೆ.

ಪೊಲೀಸರು ದಲಿತ ಪ್ರೇರಣಾ ಸ್ಥಳದ ಸಮೀಪ ರಸ್ತೆಗೆ ಅಡ್ಡಲಾಗಿ ಟ್ರಕ್‌ಗಳು ಮತ್ತು ಕ್ರೇನ್‌ಗಳನ್ನು ನಿಲ್ಲಿಸಿದ್ದಾರೆ. ಮೂರು ಲೇನ್‌ಗಳ ಪೈಕಿ ಎರಡನ್ನು ಅಡ್ಡಗಟ್ಟಲಾಗಿದೆ. ಮಯೂರ ವಿಹಾರದ ಕಡೆಗಿನ ಒಂದು ಲೇನ್ ಅನ್ನು ಮಾತ್ರ ವಾಹನ ಸಂಚಾರಕ್ಕೆ ಮುಕ್ತವಾಗಿಸಲಾಗಿದೆ. ನೋಯ್ಡಾ ಎಕ್ಸ್‌ಪ್ರೆಸ್‌ ವೇಗೆ ಪ್ರವೇಶಿಸುವ ಎಲ್ಲಾ ಮಾರ್ಗಗಳನ್ನೂ ಸಂಚಾರ ಪೊಲೀಸರು ತಡೆದಿದ್ದಾರೆ.

ನೋಯ್ಡಾ- ದಿಲ್ಲಿ ಭಾಗಗಳಲ್ಲಿನ ಸಂಚಾರ ದಟ್ಟಣೆಯಲ್ಲಿ ಅಪಾರ ಸಂಖ್ಯೆಯ ವಾಹನ ಸವಾರರು ಸಿಲುಕಿಕೊಂಡಿದ್ದಾರೆ.

ರೈತರು ರಾಜಧಾನಿ ಪ್ರವೇಶಿಸದಂತೆ ತಡೆಯಲು ದಿಲ್ಲಿ ಪೊಲೀಸರು ಚಿಲ್ಲಾ ಗಡಿಯಲ್ಲಿ ಜಲ ಫಿರಂಗಿಗಳು ಮತ್ತು ಬೃಹತ್ ಸಂಖ್ಯೆಯ ಪಡೆಗಳನ್ನು ನಿಯೋಜಿಸಿದ್ದಾರೆ. ಸಿಮೆಂಟ್ ಗೋಡೆಗಳು, ಮರಳಿನ ಚೀಲಗಳು ಹಾಗೂ ಮುಳ್ಳು ತಂತಿಗಳನ್ನು ಅಳವಡಿಸಲಾಗಿದೆ. ಪ್ರತಿಬಂಧಕಾಜ್ಞೆಗಳನ್ನು ಹೊರಡಿಸಲಾಗಿದೆ. ಜನರು ನೋಯ್ಡಾ ಎಕ್ಸ್‌ಪ್ರೆಸ್‌ ವೇ ಪ್ರವೇಶಿಸದೆ ಒಳಗಿನ ಮಾರ್ಗಗಳನ್ನು ಬಳಸುವಂತೆ ನೋಯ್ಡಾ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.

ಉತ್ತರ ಪ್ರದೇಶ ಮತ್ತು ಹರ್ಯಾಣದ ಮತ್ತಷ್ಟು ರೈತರು ಇದಕ್ಕೆ ಸೇರಿಕೊಳ್ಳುವ ಸಾಧ್ಯತೆ ಇರುವುದರಿಂದ ಅವರನ್ನು ತಡೆಯಲು ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

ರೈತರ ಪ್ರತಿಭಟನೆಗೆ ಕಾರಣವೇನು?

ಮೂರು ಕೃಷಿ ಕಾಯ್ದೆಗಳ ವಿರುದ್ಧ ದಿಲ್ಲಿ ಗಡಿಯಲ್ಲಿ ಐತಿಹಾಸಿಕ ಪ್ರತಿಭಟನೆಯ ಮೂರು ವರ್ಷಗಳ ನಂತರ ರಾಷ್ಟ್ರ ರಾಜಧಾನಿ ಸಮೀಪ ಅನ್ನದಾತರ ಮತ್ತೊಂದು ಬೃಹತ್ ಪ್ರತಿಭಟನೆ ಆರಂಭವಾಗಿದೆ. ಆದರೆ ಇದು ಕೇಂದ್ರದ ಕಾಯ್ದೆಗಳಿಗೆ ಸಂಬಂಧಿಸಿದ ಪ್ರತಿಭಟನೆಯಲ್ಲ. ಬದಲಾಗಿ ಪರಿಹಾರ ಹೆಚ್ಚಳಕ್ಕೆ ಇರಿಸಿರುವ ಬೇಡಿಕೆಯಾಗಿದೆ.

ಉತ್ತರ ಪ್ರದೇಶದ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ಸ್ಥಳೀಯ ಅಭಿವೃದ್ಧಿ ಪ್ರಾಧಿಕಾರವು ಮೂಲಸೌಕರ್ಯ ಹಾಗೂ ಇತರೆ ಯೋಜನೆಗಳ ಸಲುವಾಗಿ ರೈತರಿಂದ ಸ್ವಾಧೀನಪಡಿಸಿಕೊಂಡ ಜಮೀನಿಗೆ ನೀಡಲಾಗುತ್ತಿರುವ ಪರಿಹಾರವನ್ನು ಹೆಚ್ಚಿಸಬೇಕು ಮತ್ತು ಅಭಿವೃದ್ಧಿಪಡಿಸಿದ ಪ್ಲಾಟ್‌ಗಳನ್ನು ನೀಡಬೇಕು ಎಂದು ಬೇಡಿಕೆ ಇರಿಸಿ ಈ ಪ್ರತಿಭಟನೆ ನಡೆಸಲಾಗುತ್ತಿದೆ.

Shares:

Related Posts

Leave a Reply

Your email address will not be published. Required fields are marked *