ಕೋಲಾರ : ರಾಜ್ಯದಲ್ಲಿ ನವವಿವಾಹಿತ ಜೋಡಿ ಬದುಕಿನಲ್ಲಿ ಸಿನಿಮಾ ಶೈಲಿಯ ಕಥೆ ನಡೆದಿದೆ. ಬೆಳಗ್ಗೆ ಮದುವೆ ಆಗಿ, ಮಧ್ಯಾಹ್ನ ಜಗಳವಾಗಿ , ಸಂಜೆ ಆಗುತ್ತಲೆ ಸಪ್ತಪದಿ ತುಳಿದ ಮಡದಿಯನ್ನೇ ಕೊಂದ ವರನ ಸ್ಥಿತಿಯೂ ಗಂಭೀರವಾಗಿದೆ.
ಕೋಲಾರ ಜಿಲ್ಲೆಯಲ್ಲಿ ಬೆಳಗ್ಗೆ ಮದುವೆ, ಮಧ್ಯಾಹ್ನ ಜಗಳ, ಸಂಜೆ ವೇಳೆಗೆ ವಧುವನ್ನು ಕೊಚ್ಚಿಹಾಕಿದ ವರ ಅಂತಿಮವಾಗಿ ತಾನೂ ಅದೇ ಮಚ್ಚಿನಿಂದ ಹೊಡೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕೋಲಾರದ ಮೆಡಿಕಲ್ ಕಾಲೇಜಿನಲ್ಲಿ ನಡೆದಿದ್ದು, ಪತಿರಾಯ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ.
ಕೆಜಿಎಫ್ ತಾಲ್ಲೂಕಿನ ತ್ಯಂಬರಸನಹಳ್ಳಿಯಲ್ಲಿ ಘಟನೆ ನಡೆದಿದ್ದು, ಲಿಖಿತಶ್ರೀ ಸ್ಥಳದಲ್ಲೇ ಮೃತಪಟ್ಟಿದ್ದು, ವರ ಕೋಲಾರದ ಮೆಡಿಕಲ್ ಕಾಲೇಜಿನಲ್ಲಿ ಜೀವನ್ಮರಣದ ಜತೆಯಲ್ಲಿ ಹೋರಾಟ ಮಾಡುತ್ತಿದ್ದಾನೆ.
ಬೆಳಗ್ಗೆ 11.30ಕ್ಕೆ ಮದುವೆ ನಡೆದಿದ್ದು ಕೆಲವೇ ಗಂಟೆಗಳಲ್ಲಿ ಗಂಡ ಹಂಡತಿ ಜಗಳ ಆಡಿಕೊಂಡಿದ್ದಾರೆ. ನಂತರ ರೂಂ ಸೇರಿದ ದಂಪತಿ ಹೊಡೆದಾಡಿಕೊಂಡಿದ್ದು ಇಬ್ಬರಿಗೂ ಗಂಭೀರ ಗಾಯಗಳಾಗಿದ್ದನ್ನು ಗಮನಿಸಿದ ನೆಂಟರು ದಂಪತಿಯನ್ನು ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದರೂ ಲಿಖಿತ ಕೊನೆಯುಸಿರೆಳಿದಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ನಂತರ ನವೀನ್‌ನನ್ನು ಕೋಲಾರದ ಮೆಡಿಕಲ್
ಕಾಲೇಜಿಗೆ ರವಾನೆ ಮಾಡಿದ್ದು ಐಸಿಯುದಲ್ಲಿ ಚಿಕಿತ್ಸೆ ಮುಂದುವರೆದಿದೆ. ಆಂಡರ್‌ಸನ್ ಪೇಟೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪರಸ್ಪರ ಸಂಬಂಧಿಕರಾಗಿದ್ದ ಲಿಖಿತಶ್ರೀ ಮತ್ತು ನವೀನ್ ಮದುವೆ 4ತಿಂಗಳ ಹಿಂದೆ ನಿಶ್ಚಯ ಆಗಿತ್ತಾದರೂ ನಂತರ ಕ್ಯಾನ್ಸಲ್ ಸಹಾ ಆಗಿತ್ತು. ಆದರೆ ಸಂಬಂಧಿಕರು,ಸ್ನೇಹಿತರ ಮಧ್ಯಸ್ಥಿಕೆ ಯಿಂದಾಗಿ ಪುನಃ ಸಂದಾನ ನಡೆದು ಕಳೆದ ವಾರ ಮದುವೆ ದಿನಾಂಕ ನಿಗದಿ ಮಾಡಲಾಗಿತ್ತು. ಮದುವೆ ಶಾಸ್ತ್ರದಲ್ಲಿ ಲಿಖಿತ ಲವಲವಿಕೆಯಿಂದ ಇದ್ದರೂ ನವೀನ್ ಅನ್ಯಮನಸ್ಕನಾಗಿ ಚಿಂತಾಕ್ರಾಂತನಾಗಿದ್ದನಾದರೂ ಎಲ್ಲವೂ ಸರಿ ಹೋಗುತ್ತದೆ ಎಂದು ನೆಂಟರು ಅಂದುಕೊಂಡಿದ್ದರು. ಆದರೆ ಮಧ್ಯಾಹ್ನ ಊಟ ಮಾಡುವಾಗಲೇ ಆರಂಭವಾದ ಗಲಾಟೆ ಸಂಜೆ 6 ಗಂಟೆ ವೇಳೆಗೆ ಕೊಲೆಯಲ್ಲಿ ಅಂತ್ಯಕಂಡಿದೆ.