ಹುಬ್ಬಳ್ಳಿ: ಮೋಸ ಹೋಗುವವರು ಎಲ್ಲಿಯವರೆಗೆ ಇರುತ್ತಾರೋ, ಅಲ್ಲಿಯವರೆಗೆ ಮೋಸ ಮಾಡುವವರೂ ಇದ್ದೇ ಇರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಇಲ್ಲೊಂದು ಪ್ರಕರಣದಲ್ಲಿ ಕೆಲಸ ಕೊಟ್ಟ ಕಂಪನಿ ಮಾಲೀಕನಿಗೇ ವಂಚನೆ ಮಾಡಲಾಗಿದೆ.
ಹೌದು, ದೆಹಲಿ ಮೂಲದ ಮೋಹಿತ್ ಜೋಶಿ, ದೀಪಕ್ ಜೋಶಿ ಎಂಬಾತರೇ ವಂಚನೆಗೆ ಒಳಗಾಗಿದ್ದು, ವಿಕ್ರಮ ಗೌರವ್, ವಿನಾಯಕ ಪಾಟೀಲ್, ಸೂರಜ್ ಕಾಕಟಕರ್, ಸಿದ್ದಾರ್ಥ ಪಾಟೀಲ್, ರೂಪಾ ಬೆಟಗೌಡ, ಉತ್ತಮ ಗಾಡಿ, ಮಾನಸಿ ಚಂದಗಡಕರ ಎಂಬುವವರ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ.
ಮೋಹಿತ್ ಜೋಶಿ ಒಡೆತನದ ಡೈರೆಕ್ಟ್ ಸೇಲಿಂಗ್ ಕಂಪನಿಯಾದ “Internatia Marketing pvt ltd” ಕಂಪನಿಯಲ್ಲಿ ಫೆಬ್ರವರಿ 2024 ರಿಂದ ಮೇಲೆ ತಿಳಿಸಿದ ವಂಚಕರು ಕೆಲಸಕ್ಕೆ ಸೇರಿಕೊಂಡು ಹುಬ್ಬಳ್ಳಿಯ ನವನಗರದ, ಗೋಕುಲ್ ರೋಡ್ ಹಾಗೂ ಉಣಕಲ್ ಗಳಲ್ಲಿ ಶಾಖೆಯನ್ನು ನಡೆಸುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ.
ಈಗಾಗಲೇ ದೇಶದ ವಿವಿಧೆಡೆ ಶಾಖೆಗಳನ್ನು ಹೊಂದಿರುವ Internatia Marketing pvt Ltd ಕಂಪನಿಯು, ಕಾನೂನು ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾ, ಜನರ ನಂಬಿಕೆಯ ಆನ್ಲೈನ್ ಶಾಪಿಂಗ್ ಕಂಪನಿಯಾಗಿ ರೂಪುಗೊಂಡಿದೆ.ಹಾಗಾಗಿ ಇದನ್ನೇ ಬಂಡವಾಳ ಮಾಡಿಕೊಂಡ ವಿಕ್ರಮ, ವಿನಾಯಕ, ಸೂರಜ್, ಸಿದ್ದಾರ್ಥ, ರೂಪಾ, ಉತ್ತಮ, ಮಾನಸಿ ಕಂಪನಿ ಮಾಲೀಕ ದೀಪಕ್ ಜೋಶಿಗೆ ಕಂಪನಿ ಅಭಿವೃದ್ಧಿ ಪಡಿಸುವ ಭರವಸೆ ನೀಡಿ, ಬರೋಬರಿ 33 ಲಕ್ಷ ಹಣವನ್ನು ಪಡೆದುಕೊಂಡಿದ್ದಾರಂತೆ.
ಆ ಬಳಿಕ ಕಂಪನಿಯ ಶ್ರೇಯೋಭಿವೃದ್ದಿಗೆ ಶ್ರಮಿಸಬೇಕಿದ್ದ ಇವರುಗಳು, ಉಂಡ ಮನೆಗೆ ದ್ರೋಹ ಬಗೆಯುವುದು ಎಂಬಂತೆ ಕಂಪನಿಯ ಮಾಲೀಕರಿಂದ ಹಣವನ್ನು ಪಡೆದು, ಇತ್ತ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಂದ ಹಣ ಪಡೆದು ಅದನ್ನೂ ಸರಿಯಾಗಿ ಕಂಪನಿಗೆ ನೀಡದೇ, ಕಂಪನಿಯನ್ನು ನಷ್ಟಕ್ಕೆ ಒಳಗಾಗುವಂತೆ ಮಾಡಿದ್ದಾರೆಂದು ಕಂಪನಿಯ ಮೂಲ ಮಾಲೀಕ ದೀಪಕ್ ಆರೋಪಿಸಿದ್ದಾರೆ.
ಅಷ್ಟೇ ಅಲ್ಲದೇ ಜುಲೈ 18 ರ ಬಳಿಕ ವಂಚಿಸಿದ ಆರೋಪ ಹೊತ್ತಿರುವ ವ್ಯಕ್ತಿಗಳ ಕಂಪನಿಯ ಐಡಿಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಇಷ್ಟಾದರೂ ಸಹ ಇವರುಗಳು Internatia Marketing pvt Ltd ಹೆಸರಿನಲ್ಲಿ ಶಾಖೆಯನ್ನು ಮೋಸದಿಂದ ನಡೆಸುತ್ತಿದ್ದಾರಂತೆ.
ಹಿಂದೆ ಕೂಡ ಇದೆ ತರಹದ Asort Co-commerce hub online product sales & training ಎಂಬ ಕಂಪನಿ ನಡೆಸುವಾಗ ಕೆಲಸ ಕೊಡಿಸುವುದಾಗಿ ಹಣ ಪಾವತಿಸಿಕೊಂಡು ಮೋಸ ಮಾಡಿರುವ ಕುರಿತು ಎಪಿಎಂಸಿ ನವನಗರ ಪೋಲಿಸ್ ಠಾಣೆಯಲ್ಲಿ ರೂಪಾ, ಮಾನ್ಸಿ ಹಾಗೂ ಉತ್ತಮ್ ಮೇಲೆ ಪ್ರಕರಣ ದಾಖಲಾಗಿದೆ.
ಮೊದಲೇ ದೇಶದಲ್ಲಿ ಕೊರೋನಾ ಬಳಿಕ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಈ ವಂಚಕರು ಉದ್ಯೋಗ ಕೊಡಿಸೋದಾಗಿ ಜನರಿಗೆ ಮಖ್ಮಲ್ ಟೋಪಿ ಹಾಕುತ್ತಿದ್ದಾರಂತೆ. ಈ ಮೂಲಕ ಕಂಪನಿಗೆ ಜನರಿಗೆ ಮೋಸ ಮಾಡುತ್ತಿದ್ದಾರೆ. ಯಾರು ಕೂಡಾ ಇವರ ಮಾತಿಗೆ ಮರಳಾಗದೇ ಮೋಸ ಹೋಗಬೇಡಿ ಎಂದು ಸಾರ್ವಜನಿಕರಲ್ಲಿ ಮೋಹಿತ್ ಜೋಶಿ ಮನವಿ ಮಾಡಿದ್ದಾರೆ.
ಇನ್ನು ಕಂಪನಿಗೆ ವಂಚಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಕಂಪನಿ ಮಾಲೀಕ ದೀಪಕ್ ಜೋಶಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸ್ ಇಲಾಖೆ ಈ ಆರೋಪಿತರ ಮೇಲೆ ಯಾವ ಕ್ರಮ ಕೈಗೊಳ್ಳುತ್ತದೆ ಅನ್ನೋದು ಕಾದುನೋಡಬೇಕು.