ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ ಆಗಲು ಯತ್ನಿಸಿದ ನಟೋರಿಯಸ್ ಕಳ್ಳನ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ಬಂಧಿಸಿದ್ದಾರೆ. ಹುಬ್ಬಳ್ಳಿಯ ಕಾರವಾರ ರಸ್ತೆಯ ಎಂ ಟಿ ಎಸ್ ಕಾಲೋನಿಯಲ್ಲಿ ಇಂದು ಬೆಳಿಗ್ಗೆ ಘಟನೆ ನಡೆದಿದೆ.
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟೋರಿಯಸ್ ರೌಡಿಶೀಟರ್ ಅರುಣ್ ಅಲಿಯಾಸ್ ಸೋನು ರಾಜು ನಾಯಕ್ ಎಂಬಾತನನ್ನು ಪೊಲೀಸರು ಸ್ಥಳ ಮಹಜರಿಗೆ ಕರೆತಂದಿದ್ದರು. ಈ ವೇಳೆ ಅರುಣ್ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿ ಆಗಲು ಯತ್ನಿಸಿದ್ದ. ಆಗ ಸಬ್ ಅರ್ಬನ್ ಇನ್ಸ್ಪೆಕ್ಟರ್ ಎಂ ಎಸ್ ಹೂಗಾರ್ ಆತ್ಮರಕ್ಷಣೆಗಾಗಿ ಅರುಣ್ ಕಾಲಿಗೆ ಗುಂಡು ಹಾರಿಸಿದ್ದಾರೆ.
ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಡಿ ಆರ್ ಪಮ್ಮಾರ್ ಹಾಗೂ ತರುಣ್ ಗಡ್ಡದವರ್ ಅವರ ಕೈ, ಕಾಲಿಗೆ ಗಾಯಗಳಾಗಿವೆ. ಆರೋಪಿ ಅರುಣ್ ವಿರುದ್ಧ ರಾಬರಿ, ವೇಶ್ಯಾವಾಟಿಕೆ ಸಂಬಂಧಿಸಿದಂತೆ ಒಟ್ಟು 12 ಪ್ರಕರಣಗಳು ದಾಖಲಾಗಿವೆ.
ಗಾಯಗೊಂಡಿರುವ ಆರೋಪಿ ಅರುಣ್ ಹಾಗೂ ಕಾನ್‌ಸ್ಟೆಬಲ್ ಗಳಾದ ಪಮ್ಮಾರ್ ಹಾಗೂ ತರುಣ್ ಅವರಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.